ಕೈರಾಪ್ಟರ

	ಸಸ್ತನಿ (ಮ್ಯಾಮೇಲಿಯ) ವರ್ಗದ ಒಂದು ಗಣ. ಹಕ್ಕಿಗಳಂತೆ ವಾಯುಮಂಡಲದಲ್ಲಿ ಹಾರುವ ಸಾಮಥ್ರ್ಯವುಳ್ಳ ಬಾವಲಿಗಳನ್ನು ಈ ಗಣ ಒಳಗೊಂಡಿದೆ. ಬೇರಾವ ಸಸ್ತನಿಗಳಲ್ಲೂ ಈ ಗುಣ ಕಂಡುಬರುವುದಿಲ್ಲ. ಬಾವಲಿಗಳು ಸಾಧಾರಣವಾಗಿ ಸಣ್ಣ ಗಾತ್ರದ ಜೀವಿಗಳು. ದೇಹದ ಮುಂಭಾಗದಲ್ಲಿನ ಉಪಾಂಗಗಳು (ಕೈಗಳು) ರೆಕ್ಕೆಗಳಾಗಿ ಮಾರ್ಪಾಡಾಗಿರುವುದೆ ಬಾವಲಿಗಳ ವೈಶಿಷ್ಟ್ಯ. ತೋಳಿನ ಮೂಳೆಗಳಿಗಿಂತ ಮುಂಗೈ ಮೂಳೆಗಳು ಉದ್ದವಾಗಿರುವುದೂ ಮುಂಗೈಯಲ್ಲಿ ಬಲವಾದ ರೇಡಿಯಸ್ ಮೂಳೆಯಿರುವುದೂ ಅಲ್ನ ಮೂಳೆ ಅಲಗಿನಂತಿದ್ದು ಮೊಣಕೈ ಕೀಲಿಗೆ ಒಂದುಗೂಡಿರುವುದೂ ಮಣಿಕಟ್ಟಿನ ಮೂಳೆಗಳು ಸಣ್ಣಗಿರುವುದೂ ಸ್ಕೇಫಾಯಿಡ್, ಲೂನಾರ್ ಮತ್ತು ಕ್ಯುನಿಫಾರ್ಮ್ ಮೂಳೆಗಳು ಒಟ್ಟುಗೂಡಿರುವುದೂ ಇತರ ಮುಖ್ಯ ಲಕ್ಷಣಗಳು. ಕೈ ಮತ್ತು ಬೆರಳುಗಳಲ್ಲಿರುವ ಮೂಳೆಗಳು ತೆಳುವಾಗಿವೆ ಹಾಗೂ ಉದ್ದವಾಗಿ ಚಾಚಿಕೊಂಡಿವೆ. ಆದರೆ ಮೊದಲನೆಯ ಬೆರಳು (ಹೆಬ್ಬೆಟ್ಟು) ಮೋಟಾಗಿದೆ. ಇದರ ತುದಿಯಲ್ಲಿ ಚಪ್ಪಟೆಯಾದ ಮತ್ತು ಕೊಕ್ಕೆಯಂಥ ಉಗುರು ಇದೆ. ರೆಕ್ಕೆಯ ರಚನೆಯಲ್ಲಿ ಹೆಬ್ಬೆರಳು ಪಾಲುಗೊಳ್ಳುವುದಿಲ್ಲ. ಇದು ಆಸರೆಯನ್ನು ಹಿಡಿದು ಕೊಳ್ಳುವುದಕ್ಕೆ ಮಾತ್ರ ನೆರವಾಗುತ್ತದೆ. ಇತರ ನಾಲ್ಕು ಬೆರಳುಗಳು ಉದ್ದವಾಗಿದ್ದು ರೆಕ್ಕೆಯನ್ನು ಬಿಚ್ಚಿ ಅಗಲ ಮಾಡಲು ಸಹಾಯಕವಾಗಿವೆ. ಇವುಗಳ ತುದಿಯಲ್ಲಿ ಉಗುರುಗಳಿಲ್ಲ. ಎರಡನೆಯ ಮತ್ತು ಐದನೆಯ ಬೆರಳುಗಳಲ್ಲಿನ ಮೂಳೆಗಳ ಸಂಖ್ಯೆ ಮೂರು ಮತ್ತು ನಾಲ್ಕನೆಯ ಬೆರಳುಗಳಲ್ಲಿನ ಸಂಖ್ಯೆಗಿಂತ ಕಡಿಮೆ.
ತೋಳು ಮತ್ತು ಬೆರಳುಗಳ ನಡುವೆ ಹರಡಿಕೊಂಡಂತಿರುವ ತೆಳುವಾದ ಪೊರೆಯೇ ರೆಕ್ಕೆ. ಇದು ಬೆನ್ನಿನ ಮತ್ತು ಹೊಟ್ಟೆಯ ಭಾಗದ ಚರ್ಮದ ಪಾಶ್ರ್ವರಚನೆ. ರೆಕ್ಕೆಪೊರೆತೋಳಿನ ಬಳಿ ಆರಂಭವಾಗಿ ಮುಂಗೈ ಅಂಚಿನಲ್ಲಿ ಮತ್ತು ಹೆಬ್ಬೆಟ್ಟಿನ ಬುಡದವರೆಗೆ ಹರಡಿ ಉದ್ದವಾಗಿ ಚಾಚಿರುವ ಬೆರಳುಗಳ ನಡುವೆ ಹಿಂಭಾಗದಲ್ಲಿ ಎರಡು ತೊಡೆಗಳ ಮಧ್ಯೆಯೂ ಹರಡಿರುತ್ತದೆ. ಕೆಲವು ಬಗೆಯ ಬಾವಲಿಗಳಲ್ಲಿ ರೆಕ್ಕೆ ಬಾಲವನ್ನೂ ಒಳಗೊಂಡಿರುತ್ತದೆ. ರೆಕ್ಕೆಪೊರೆಯಲ್ಲಿ ಎರಡು ಪದರಗಳಿವೆ. ಇವೆರಡರ ಮಧ್ಯೆ ಸಂಯೋಜಕ ಅಂಗಾಂಶವಿದ್ದು ಅದರ ಮೂಲಕ ರಕ್ತನಾಳಗಳ ಮತ್ತು ನರಗಳ ಕವಲುಗಳ ರೆಕ್ಕೆಯೊಳಗೆಲ್ಲ ಪಸರಿಸುತ್ತವೆ. ಮೊಣಕಾಲಿನ ಕೀಲು ಮುಂದಕ್ಕೆ ಮಡಿಚಿಕೊಂಡಿರುವುದು ಬಾವಲಿಗಳ ಇನ್ನೊಂದು ವಿಶೇಷಲಕ್ಷಣ. ಇದರಿಂದ ಬಾವಲಿಗಳು ತಲೆಕೆಳಕಾಗಿ ನೇತಾಡುವುದಕ್ಕೂ ತಲೆಭಾಗವನ್ನು ಕಾಲ್ಬೆರಳುಗಳ ಬಳಿ ಹತ್ತಿರ ತರುವುದಕ್ಕೂ ಸಾಧ್ಯವಾಗಿದೆ.

ಹಿಂಗಾಲಿನ ಮೂಳೆಗಳು ತೆಳು ಮತ್ತು ಉದ್ದವಾಗಿ ಇದ್ದರೂ ಮುಂಗೈಯ ಮೂಳೆಗಳಷ್ಟು ಉದ್ದವಾಗಿಲ್ಲ. ಮೊಣಕಾಲಿನಲ್ಲಿ ಟಿಬಿಯ ಮೂಳೆ ಮುಖ್ಯವಾದುದು ಫಿಬುಲ ಮೂಳೆ ಬಹಳ ಕಿರಿದಾಗಿದೆ. ಪಾದದಲ್ಲಿ ಸಮ ಉದ್ದದ ಐದು ಸಣ್ಣ ಬೆರಳುಗಳಿವೆ. ಪ್ರತಿಯೊಂದಕ್ಕೂ ಕೊಕ್ಕೆಯಂತಿರುವ ಉಗುರಿದೆ. ಕಾಲಿನ ಹರಡಿನ ಒಳಭಾಗದಲ್ಲಿ ಮೃದ್ವಸ್ಥಿಯಿಂದ ಕೂಡಿದ ಕಾಲ್ಕರ್ ಎಂಬ ಕಡ್ಡಿ ಆಕಾರದ ಸಣ್ಣ ರಚನೆಯಿದೆ. ಇದು ಕಾಲಿನ ಮಧ್ಯದಲ್ಲಿರುವ ಚರ್ಮದ ಪೊರೆಯ ಅಂಚಿನೊಂದಿಗೆ ಸೇರಿ ಅದು ಗಡುಸಾಗಿರುವುದಕ್ಕೆ ಸಹಾಯಕವಾಗಿದೆ. ತೊಡೆಯ ಮೂಳೆಯ (ಫೀಮರ್) ಕೀಲು ಆಡುವ ಕುದುರು ಭಾಗ (ಅಸಿಟ್ಯಾಬ್ಯುಲಮ್) ಮೇಲ್ಭಾಗದಲ್ಲಿ ಅಥವಾ ಕೆಳಭಾಗದಲ್ಲಿ ಇಲ್ಲವೆ ಎರಡು ಭಾಗಗಳಲ್ಲಿಯೂ ಅಪೂರ್ಣವಾಗಿ ರೂಪುಗೊಂಡಿದೆ.

	ಬಾವಲಿಯ ಅಸ್ಥಿಪಂಜರವೂ ಹಾರುವಿಕೆಗೆ ಅನುಕೂಲವಾಗುವಂತೆ ಮಾರ್ಪಾಡಾಗಿದೆ. ಮುಂಭಾಗದ ಪಕ್ಕೆಲುಬುಗಳು ಚಪ್ಪಟೆಯಾಗಿವೆ. ಕ್ಲಾವಿಕಲ್ (ಕಂಠ ಮೂಲಾಸ್ಥಿ) ಎದೆ ಮೂಳೆಯ ಮೇಲ್ಭಾಗವನ್ನೂ ಭುಜದ ಕೀಲನ್ನೂ ಒಟ್ಟುಗೂಡಿಸುತ್ತದೆ. ಈ ರಚನೆಗಳ ಒಟ್ಟು ಕೂಟದಿಂದ ತೋಳಿಗೆ ದೃಢತೆ ಬರುವುದಲ್ಲದೆ ತೋಳನ್ನು ರೆಕ್ಕೆಯಂತೆ ಉಪಯೋಗಿಸುವುದಕ್ಕೂ ಆಗುತ್ತದೆ. ಎದೆಯ ಮೂಳೆಯ ಮುಂದಿನ ಭಾಗದಲ್ಲಿ ಖಿ ಆಕಾರದ ಪ್ರೀಸ್ಟರ್ನಮ್ ಅಥವಾ ಮೆನೂಬ್ರಿಯಂ ಎಂಬುದೂ, ಮಧ್ಯಭಾಗ, ದೇಹಭಾಗ ಮತ್ತು ಹಿಂಭಾಗದಲ್ಲಿ ಮೊಟಕಾದ ಮತ್ತು ತಟ್ಟೆಯಂತಿರುವ ಜೆಫಿಸ್ಟರ್‍ನಮಿನ ಮೂರು ವಿಭಾಗಗಳೂ ಇವೆ. ಎದೆಯ ಮೂಳೆಯ ಕೆಳಭಾಗದಲ್ಲಿ ಉದ್ದಕ್ಕೂ ಕೀಲ್ ಮೂಳೆ ಇದೆ. ಬಾವಲಿಗೆ ಹಾರಲು ನೆರವಾಗುವ ಪೆಕ್ಟೊರಲ್ ಮಾಂಸಖಂಡಗಳು ಇದಕ್ಕೆ ಅಂಟಿಕೊಂಡಿವೆ.

	ಬಾವಲಿಗಳ ಹಿಂಗಾಲುಗಳು ಮತ್ತು ಸೊಂಟಕಟ್ಟು ದುರ್ಬಲವಾಗಿವೆ. ಆದರೂ ಬಾವಲಿ ನಡೆಯುವಾಗ ಮತ್ತು ಆಸರೆಗೆ ತಗಲಿಕೊಂಡು ನೇತಾಡುವಾಗ ಇವು ಸಹಕರಿಸುತ್ತವೆ. ತಾವು ಬಚ್ಚಿಟ್ಟುಕೊಂಡಿರುವ ಸ್ಥಳಗಳಲ್ಲಿ ಬಾವಲಿಗಳು ಚುರುಕಿನಿಂದ ಚಲಿಸಬಲ್ಲವು. ಇತರ ಸಸ್ತನಿಗಳಲ್ಲಿ ಹಿಂಗಾಲುಗಳಿಗೆ ಇರುವ ಪ್ರಮುಖತೆ ಇವುಗಳಲ್ಲಿಲ್ಲ. ಮುಂದಿನ ಉಪಾಂಗಗಳು ಹಾರಾಟಕ್ಕೆ ಅನುಕೂಲವಾಗುವಂತೆ ಮಾರ್ಪಾಡಾಗಿರುವುದೇ ಬಹುಶಃ ಇದಕ್ಕೆ ಕಾರಣ. ಸೊಂಟಭಾಗದ ಕೆಲವು ಕಶೇರುಮಣಿಗಳು ಒಟ್ಟಗೂಡಿವೆಯಲ್ಲದೆ ಇದರ ಎಡ ಮತ್ತು ಬಲ ಭಾಗಗಳು ಒಟ್ಟುಗೂಡಿದ ಕಶೇರುಮಣಿಗಳೊಂದಿಗೆ ಸೇರಿವೆ. ಹೆಣ್ಣು ಬಾವಲಿಗಳಲ್ಲಿ ಎಡ ಮತ್ತು ಬಲಭಾಗಗಳು ಕೆಳಕ್ಕೆ ಕೂಡುವೆಡೆಯಲ್ಲಿ ಆಸ್ಥಿಬಂಧನವಿಲ್ಲ. ಬಾವಲಿಗಳ ತಲೆಬುರುಡೆಯ ರಚನೆಯೂ ವಿಶಿಷ್ಟವಾಗಿದೆ. ಕೆನ್ನೆಯ ಕಮಾನು ತೆಳುವಾಗಿದೆ. ಹೊರಕಿವಿಯ ಎಲುಬಿನ ಕೊಳವೆಯ ಭಾಗ ತಲೆಬುರುಡೆಯ ಇತರ ಮೂಳೆಗಳೊಂದಿಗೆ ಸ್ವಲ್ಪ ಸಡಿಲವಾಗಿ ಕೂಡಿಕೊಂಡಿದೆ. ಮೇಲ್ದವಡೆಯ ಮುಂಭಾಗದಲ್ಲಿ ಹಲ್ಲುಗಳಿರುವ ಪ್ರೀಮ್ಯಾಕ್ಸಿಲ ಮೂಳೆಗಳು ಸ್ವಲ್ಪ ಕ್ಷೀಣವಾಗಿವೆ ಹಾಗೂ ಇತರ ಮೂಳೆಗಳಿಗೆ ಸ್ವಲ್ಪ ಸಡಿಲವಾಗಿ ಅಂಟಿವೆ. ಪ್ರೀಮ್ಯಾಕ್ಸಿಲಗಳ ಮುಂಭಾಗದಲ್ಲಿ ಉದ್ದವಾದ ಮತ್ತು ಆಳವಾದ ಒಂದು ಕಚ್ಚು (ಕ್ಲೆಫ್ಟ್) ಇದೆ.

	ಪ್ರಾಚೀನ ಬಾವಲಿಗಳ ಬಾಲ ಉದ್ದವಾಗಿಯೂ ಕಾಲುಗಳ ಮಧ್ಯೆ ಇರುವ ರೆಕ್ಕೆಪೊರೆಯಿಂದ ಬೇರೆಯಾಗಿಯೂ ಇರುತ್ತದೆ. ದಕ್ಷಿಣ ಪೆಸಿಫಿಕ್ ಸಾಗರದಲ್ಲಿನ ದ್ವೀಪಗಳಲ್ಲಿ ಜೀವಿಸುವ ನೋಟಾಪ್ಟೆರಿಸ್ ಮತ್ತು ರೈನೊಫೋಮ ಬಾವಲಿಗಳಲ್ಲಿ ಬಾಲ ಹಿಂಗಾಲಿನಷ್ಟೇ ಉದ್ದವಾಗಿದೆ. ಬಾಲ ಇಲ್ಲದಿರುವ ಅಥವಾ ಇದ್ದರೂ ಮೋಟಾಗಿರುವ ಬಾವಲಿಗಳೂ ಇವೆ. ಎಂಬಲೊನ್ಯೂರಿಡೀ ಗುಂಪಿನ ಬಾವಲಿಗಳಲ್ಲಿ ಬಾಲದ ಮುಂದಿನ ಭಾಗ ರೆಕ್ಕೆಪೊರೆಯಲ್ಲಿ ಅಡಗಿದ್ದು ಹಿಂದಿನ ಭಾಗ ಮಾತ್ರ ಹೊರಚಾಚಿದೆ.

	ಬಾವಲಿಗಳು ಸಾಧಾರಣವಾಗಿ ಹಿಂಗಾಲುಗಳಲ್ಲಿನ ಉಗುರುಗಳ ಸಹಾಯದಿಂದ ಆಸರೆಗೆ ತಗುಲಿಕೊಂಡು ನೇತಾಡುತ್ತಿರುತ್ತವೆ. ಆದರೆ ಕೈರಾಪ್ಟರಿಡೀ ಮತ್ತು ಮೈಜೊóಪೋಡಿಡೀ ಕುಟುಂಬಗಳಿಗೆ ಸೇರಿದ ಬಾವಲಿಗಳು ಮುಂಗೈ ಹೆಬ್ಬೆಟ್ಟಿನಲ್ಲಿ ಮತ್ತು ಕಾಲಿನ ಬುಡದಲ್ಲಿ ಕಾಣಬರುವ ತಟ್ಟೆಗಳಂಥ ರಚನೆಗಳ ಸಹಾಯದಿಂದ ನೇತಾಡುತ್ತವೆ.

	ಬಾವಲಿಗಳಲ್ಲಿ ಸಸ್ಯಾಹಾರಿಗಳೂ ಉಂಟು, ಮಾಂಸಾಹಾರಿಗಳೂ ಉಂಟು. ಸಸ್ಯಾಹಾರಿ ಬಾವಲಿಗಳ (ಮೆಗಕೈರಾಷ್ಟರ ಉಪಗಣ) ಪ್ರಧಾನ ಆಹಾರ ಹಣ್ಣುಹಂಪಲು. ಕೆಲವು ಬಾವಲಿಗಳು ಪರಾಗವನ್ನೂ ಮಕರಂದವನ್ನೂ ಸೇವಿಸುವುದುಂಟು. ಮೈಕ್ರೊಕೈರಾಷ್ಟರ ಉಪಗಣಕ್ಕೆ ಸೇರಿದ ಬಾವಲಿಗಳೆಲ್ಲವೂ ಮಾಂಸಾಹಾರಿಗಳು. ಈ ಉಪಗಣದಲ್ಲಿನ ಮಿಸ್ಟಸಿನಿಡೀ ಮತ್ತು ಮೆಗಡರ್ಮಿಡೀ ಕುಟುಂಬದವು ಕೀಟಗಳನ್ನೂ ಸಣ್ಣಪುಟ್ಟ ಕಶೇರುಕಗಳನ್ನೂ ತಿನ್ನುತ್ತವೆ. ನಾಕ್ಟಿಲಿಯಾನಿಡೀ ಕುಟುಂಬಕ್ಕೆ ಸೇರಿದ ಬಾವಲಿಗಳು ಮೀನುಗಳನ್ನು ಭಕ್ಷಿಸುತ್ತವೆ. ಡೆಸ್ಮೊಡಾಂಟಿಡೀ ಕುಟುಂಬದ ಬಾವಲಿಗಳು ಜೀವಂತ ಸಸ್ತನಿಗಳ (ಮೇಕೆ, ಜಿಂಕೆ, ಇತ್ಯಾದಿ) ರಕ್ತವನ್ನು ಹೀರುತ್ತವೆ. ಇವಕ್ಕೆ ವ್ಯಾಂಪೈರ್ ಬಾವಲಿಗಳೆಂದು ಹೆಸರಿದೆ.

	ಆಹಾರಸೇವನೆಯ ಕ್ರಮವನ್ನನುಸರಿಸಿ ಬಾವಲಿಗಳ ಹಲ್ಲುಗಳ ಸಂಖ್ಯೆ ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ ಈ ಸಂಖ್ಯೆ 38ನ್ನು ಮೀರುವುದಿಲ್ಲ. ಮೇಲ್ದವಡೆಯಲ್ಲಿ 4 ಬಾಚಿಹಲ್ಲುಗಳು, 2 ಕೋರೆಹಲ್ಲುಗಳು, 6 ಮುಂದವಡೆ ಹಲ್ಲುಗಳು ಮತ್ತು 6 ಹಿಂದವಡೆ ಹಲ್ಲುಗಳಿವೆ. ಕೆಳದವಡೆಯಲ್ಲಿ ಇವು ಅನುಕ್ರಮವಾಗಿ 6, 2, 6 ಮತ್ತು 6 ಇವೆ.

	ಕೀಟಾಹಾರಿ ಬಾವಲಿಗಳಲ್ಲಿ ಕೋರೆಹಲ್ಲುಗಳು ಉದ್ದವಾಗಿಯೂ ತುದಿಯಲ್ಲಿ ಬಹು ಮೊನಚಾಗಿಯೂ ಇವೆ. ಇದರಿಂದ ಇವು ಕೀಟಗಳನ್ನು ಹಿಡಿಯುವುದಕ್ಕೂ ಅವನ್ನು ಸಿಗಿಯುವುದಕ್ಕೂ ಸಹಾಯವಾಗುತ್ತದೆ. ಕೀಟಾಹಾರಿ ಬಾವಲಿಗಳ ಹಿಂದವಡೆ ಹಲ್ಲುಗಳು ಇನ್ಸೆಕ್ಟಿವೋರ ಗಣಕ್ಕೆ ಸೇರಿದ ಮೋಲ್ ಮತ್ತು ಸುಂಡಿಲಿಗಳ ಹಲ್ಲುಗಳನ್ನು ಹೋಲುವುದರಿಂದ ಬಾವಲಿಗಳಿಗೂ ಇನ್ಸೆಕ್ಟಿವೋರ ಗಣಕ್ಕೂ ಸಂಬಂಧವಿದೆಯೆಂದು ಭಾವಿಸಲಾಗಿದೆ.

	ಹಣ್ಣುಹಂಪಲು ತಿನ್ನುವ ಫಿಲೊಸ್ಪೋಮಿಡೀ, ಟೀರೋಪಿಡೀ ಕುಟುಂಬಳಿಗೆ ಸೇರಿದ ಬಾವಲಿಗಳಲ್ಲಿ ದವಡೆಯ ಹಲ್ಲುಗಳು ವಸಡುಗಳ ಮೇಲೆ ಹೆಚ್ಚಿಗೆ ಎತ್ತರವಿರುವುದಿಲ್ಲ ಮತ್ತು ಇವುಗಳ ಮೇಲ್ಭಾಗ ಅಗಲವಾಗಿಯೂ ಚಪ್ಪಟೆಯಾಗಿಯೂ ಇದ್ದು ಆಹಾರವನ್ನು ಅರೆಯುವುದಕ್ಕೆ ಸಹಕಾರಿಯಾಗಿದೆ.

	ಮಕರಂದವನ್ನು ಆಹಾರವಾಗಿ ಸೇವಿಸುವ ಗ್ಲಾಸೊಫೇಗ ಎಂಬ ಬಾವಲಿಗಳಲ್ಲಿ ಮುಸುಡು ಉದ್ದವಾಗಿದ್ದು ಕ್ಷಯಿಸಿದ ಹಲ್ಲುಗಳೂ ಬಹಳ ಉದ್ದವಾದ ಮತ್ತು ತೆಳುವಾದ ನಾಲಿಗೆಯೂ ಇವೆ. ನೀಳವಾದ ಈ ನಾಲಿಗೆಯಿಂದ ಹೂವಿನಲ್ಲಿರುವ ಮಕರಂದವನ್ನು ಇವು ಲೊಚಲೊಚ ನೆಕ್ಕುತ್ತವೆ. ಹಲ್ಲುಗಳು ಬೇಕಾಗಿಲ್ಲವಾದ್ದರಿಂದ ಇವು ಕ್ಷೀಣವಾಗಿವೆ. ಇದೇ ರೀತಿ ರಕ್ತಹೀರುವ ವ್ಯಾಂಪೈರ್ ಬಾವಲಿಗಳಲ್ಲೂ ಬಲು ಚಿಕ್ಕಗಾತ್ರದ ಹಲ್ಲುಗಳಿವೆ. ಇವುಗಳಲ್ಲಿ ಕೇವಲ 6 ಬಾಚಿಹಲ್ಲು, 4 ಕೋರೆಹಲ್ಲು, 6 ಮುಂದವಡೆಹಲ್ಲು ಮತ್ತು 6 ಹಿಂದವಡೆಹಲ್ಲುಗಳಿವೆ. ಬಾಚಿಹಲ್ಲುಗಳು ಬಲುಚೂಪಾಗಿದ್ದು ಆಹಾರ ಪ್ರಾಣಿಗಳ ಚರ್ಮವನ್ನು ಕತ್ತರಿಸಿ ರಕ್ತ ಹೊರಬರುವಂತೆ ಮಾಡಲು ಅನುಕೂಲವಾಗಿವೆ.

	ರೆಕ್ಕೆಪೊರೆ, ಬಾಯಿಯ ಸುತ್ತಣ ಭಾಗ ಮತ್ತು ಮೂಗಿನ ಹೊಳ್ಳೆ ಪ್ರದೇಶವನ್ನುಳಿದು ದೇಹದ ಉಳಿದ ಭಾಗದಲ್ಲೆಲ್ಲ ಮೃದುವಾದ ತುಪ್ಪುಳದಿಂದ ಕೂಡಿದ ಕೂದಲಿನ ಹೊದಿಕೆಯಿದೆ.

	ಬಾವಲಿಗಳ ಹೊರಗಿವಿಗಳು ಸಾಮಾನ್ಯವಾಗಿ ದೊಡ್ಡವು. ಕೆಲವು ಬಾವಲಿಗಳಲ್ಲಿ ಕಿವಿಗಳು ತಲೆ ಮತ್ತು ದೇಹದ ಉದ್ದದಷ್ಟಿರಬಹುದು. ಹೊರಗಿವಿಗಳು ಸಾಧಾರಣವಾಗಿ ತೆಳುವಾದ ಪೊರೆಯಂತಿವೆ ಮತ್ತು ಕೂದಲುಗಳಿಂದ ಆವೃತವಾಗಿಲ್ಲ. ಹೊರಗಿವಿಯ ಒಳಮೈಮೇಲೆ ಕಿವಿಯ ಬುಡದಿಂದ ಹೊರ ಅಂಚಿನವರೆಗೆ ಚಾಚಿರುವ ತೋಡುಗಳು, ದಿಂಡುಗಳು ಇವೆ. ಇವುಗಳ ಆಕಾರ, ರಚನಾಕ್ರಮ ಮತ್ತು ವ್ಯವಸ್ಥೆ ವಿವಿಧ ನಮೂನೆಗಳಾಗಿರುವುದರಿಂದ ಬಾವಲಿಗಳ ಜಾತಿ ಮತ್ತು ಪ್ರಭೇದಗಳನ್ನು ಗುರುತಿಸುವುದಕ್ಕೆ ಸಹಾಯಕವಾಗುವ ಅನೇಕ ಚಿಹ್ನೆಗಳಲ್ಲಿ ಈ ವ್ಯತ್ಯಾಸವೂ ಒಂದು. ವೆಸ್ಪರ್ಟೀಲಿಯಾನಿಡೀ ಕುಟುಂಬದ ಬಾವಲಿಗಳಲ್ಲಿ ಕಿವಿಯಲ್ಲಿ ಟ್ರೇಗಸ್ ಎಂಬ ದೊಡ್ಡ ದೊಡ್ಡ ಅಲೆ ಇದೆ. ರೈನೊಲೋಫಿಡೀ ಬಾವಲಿಗಳಲ್ಲಿ ಟ್ರೇಗಸ್ ಇಲ್ಲ. ಟ್ರೇಗಸ್‍ನಿಂದ ಉಪಯೋಗವೇನೆಂದು ಇನ್ನೂ ಸರಿಯಾಗಿ ತಿಳಿದಿಲ್ಲ. ಶ್ರವಣಾತೀತ ಶಬ್ದದ ಅಲೆಗಳನ್ನು ಗ್ರಹಿಸಿ ಅವುಗಳ ದಿಕ್ಕನ್ನು ಬಾವಲಿ ಅರಿಯಲು ಇದು ಸಹಕಾರಿಯಾಗಿದೆಯೆಂದು ಹೇಳಲಾಗಿದೆ.

	ಕೆಲವು ಬಾವಲಿಗಳಲ್ಲಿ ವಿವಿಧ ಬಗೆಯ ನಾಸಿಕ ಪತ್ರಗಳಿವೆ. ಇವುಗಳ ಉಪಯೋಗ ಖಚಿತವಾಗಿ ಗೊತ್ತಿಲ್ಲ. ಬಾವಲಿ ಹಾರುವಾಗ ದೇಹವನ್ನು ಯಾವ ಪದಾರ್ಥಕ್ಕೂ ತಗುಲಿಸದಂತೆ ಹಾರುವ ಮತ್ತು ಹಾರುವ ದಿಕ್ಕಿನಲ್ಲಿ ಯಾವುದಾದರೂ ಅಡ್ಡಿಯಿದ್ದರೆ ಅದನ್ನು ದೂರದಿಂದಲೇ ತಿಳಿಯುವ ಸಾಮಥ್ರ್ಯಕ್ಕೆ ನಾಸಿಕಪತ್ರಗಳೇ ಕಾರಣ ಎಂದು ಅಭಿಪ್ರಾಯ ಪಡಲಾಗಿದೆ. ಈ ನಾಸಿಕ ಪತ್ರಗಳಿಂದಾಗಿ ಮಾನವ ಗುರುತಿಸಲು ಸಾಧ್ಯವಾಗದಿರುವ ರೀತಿಯ ಜ್ಞಾನವಾಹಕ ಶಕ್ತಿ ಬಾವಲಿಗಳಿಗೆ ಇದೆಯೆಂದು ಹೇಳುವುದಿದೆ. ನಾಸಿಕಪತ್ರಗಳ ತಳದಲ್ಲಿ ಕಾಣಬರುವ ನರಗಳ ಹರಡುವಿಕೆ ಈ ಊಹೆಗೆ ಪುಷ್ಟಿ ಕೊಡುತ್ತದೆ. ಬಾವಲಿಗಳ ಕಣ್ಣುಗಳು ಸಣ್ಣಗಾತ್ರದವಾದರೂ ದೃಷ್ಟಿ ಬಹುಸೂಕ್ಷ್ಮ.

	ಬಾವಲಿಗಳ ಇನ್ನೊಂದು ಲಕ್ಷಣ ಮುಸುಡಿನ ಕೆಳಭಾಗಕ್ಕೂ ತುಪ್ಪಳಕ್ಕೂ ಮಧ್ಯೆ ಇರುವ ಸೆಬೇಷಿಯಸ್ ಗ್ರಂಥಿಗಳು. ಇವುಗಳಿಂದ ಒಂದು ಬಗೆಯ ಕಮಟು ವಾಸನೆಯ ದ್ರವ ಒಸರುತ್ತದೆ. ಇದು ತುಪ್ಪುಳ ಮೃದುವಾಗಿ ನಯವಾಗಿ ಇರುವಂತೆ ಮಾಡುವುದಲ್ಲದೆ ಬಾವಲಿಗಳು ವಾಸಿಸುವ ಸ್ಥಳವನ್ನು ದುರ್ಗಂಧಯುಕ್ತವನ್ನಾಗಿ ಮಾಡಿ ಬೇರಾವ ಪ್ರಾಣಿಯೂ ಸುಳಿಯದಂತೆ ಮಾಡುತ್ತದೆ.

	ಬಾವಲಿಗಳ ಹಾರುವಿಕೆ ವೈಶಿಷ್ಟ್ಯಪೂರ್ಣವಾದುದೂ ವೈವಿಧ್ಯಮಯವೂ ಆಗಿದೆ.

	ಬಾವಲಿಗಳು ಕೊಳಕು ಪ್ರಾಣಿಗಳೆಂದು ಸಾಮಾನ್ಯ ಜನರ ಅಭಿಪ್ರಾಯ. ಆದರೆ ಈ ಅಭಿಪ್ರಾಯ ತಪ್ಪು. ಇವು ತಲೆಕೆಳಗಾಗಿ ಜೋತಾಡುತ್ತ ವಿಶ್ರಾಂತಿ ಪಡೆಯುವಾಗ ತಮ್ಮ ರೆಕ್ಕೆಗಳ ಹೊರ ಮತ್ತು ಒಳ ಭಾಗಗಳನ್ನು ನಾಲಿಗೆಯಿಂದ ನೆಕ್ಕಿ ನೀರಿನಲ್ಲಿ ತೊಳೆದಂತೆ ಶುಚಿ ಮಾಡುತ್ತದೆ. ಅಲ್ಲದೆ ಕಾಲಿನಲ್ಲಿನ ನಖಗಳ ಸಹಾಯದಿಂದ ತುಪ್ಪುಳವನ್ನು ಬಾಚಿಕೊಂಡು ಶುಚಿಮಾಡುವುದೂ ಉಂಟು. ಮಲಗಿರುವಾಗ ರೆಕ್ಕೆಗಳನ್ನು ಪೂರ್ತಿ ಅಗಲಿಸಿ ಅನೇಕ ಬಾರಿ ಕೊಡವಿ ಜಾಗರೂಕತೆಯಿಂದ ಪುನಃ ಮಡಿಸಿಕೊಳ್ಳುವುದುಂಟು. ಇಷ್ಟೆಲ್ಲ ಶುಚಿ ಮಾಡಿದರೂ ತುಪ್ಪುಳದಲ್ಲಿ ಕೆಲವು ಪರಾವಲಂಬಿಗಳು ಇದ್ದೇ ಇರುತ್ತವೆ.

	ಸಾಮಾನ್ಯವಾಗಿ ಬಾವಲಿಗಳು ಸಂಘಜೀವಿಗಳು. ಒಂದೊಂದು ಗುಂಪು ಕೇವಲ ಕೆಲವೇ ಬಾವಲಿಗಳಿಂದ ಹಿಡಿದು ಲಕ್ಷಾಂತರ ಬಾವಲಿಗಳಿಂದ ಕೂಡಿರಬಹುದು. (ಉದಾಹರಣೆಗೆ ನ್ಯೂ ಮೆಕ್ಸಿಕೋದಲ್ಲಿನ ಕಾಲ್ರ್ಸ್‍ಬಾಡ್ ಗುಹೆಗಳಲ್ಲಿ ಟೆಡಾರಿಡ ಎಂಬ ಜಾತಿಯ 9 ಮಿಲಿಯನ್ ಬಾವಲಿಗಳು ಒಟ್ಟಾಗಿ ವಾಸಿಸುತ್ತವೆ ಎಂದು ಹೇಳಲಾಗಿದೆ) ಸಾಮಾನ್ಯವಾಗಿ ಇವು ಗುಹೆಗಳಲ್ಲೊ ಮರಗಳಲ್ಲೊ ಹಳೆಯ ಮನೆಗಳಲ್ಲೊ ವಾಸಿಸುತ್ತವೆ. ನೂರಾರು ವರ್ಷಗಳಿಂದ ಒಂದೇ ನೆಲೆಯಲ್ಲಿ ಜೀವಿಸುವುದು.  ಇವುಗಳ ಇನ್ನೊಂದು ವಿಶೇಷ ಗುಣ. ರಾತ್ರಿಯೆಲ್ಲ ಆಹಾರದ ಬೇಟೆಯಲ್ಲಿ ತೊಡಗಿದ್ದು ಬೆಳಗಿನ ಜಾವ ನೆಲೆಗೆ ವಾಪಸು ಒಂದು ಮೇಲ್ಚಾವಣೆಗೆ ನೇತುಬಿದ್ದು ನಿದ್ರೆ ಹೋಗುತ್ತದೆ.

	ವಂಶಾಭಿವೃದ್ಧಿ ಕಾಲದಲ್ಲಿ ಮಾತ್ರ ಗಂಡು ಹೆಣ್ಣು ಬಾವಲಿಗಳು ಒಂದೆಡೆಯಲ್ಲಿಯೇ ಜೀವಿಸುತ್ತದೆ. ಮರಿಗಳನ್ನು ಈಯುವ ಕಾಲದಲ್ಲಿ ಬೇರೆ ಬೇರೆಯಾಗಿ ಮರಿಗಳು ಹುಟ್ಟಿದ ಕೆಲವು ವಾರಗಳ ಅನಂತರ ಮತ್ತೆ ಗಂಡು ಹೆಣ್ಣು ಬಾವಲಿಗಳು ಒಂದುಗೂಡುತ್ತವೆ.

	ಸಾಮಾನ್ಯವಾಗಿ ಬಾವಲಿಗಳನ್ನು ಬಂಧನದಲ್ಲಿಡುವುದು ಕಷ್ಟ. ಆದರೂ ಕೆಲವು ಬಾವಲಿಗಳನ್ನು ಸಾಕುವುದುಂಟು. ಸಾಕಿದ ಕೆಲವೆಡೆಗಳಲ್ಲಿ ಸ್ವಲ್ಪಮಟ್ಟಿಗೆ ಕೈಯಿಂದ ಆಹಾರವನ್ನು ತಿನ್ನುವಷ್ಟು ಅವು ಪಳಗಿವೆ. ನಾಕ್ಟ್ಯೂಲ್ ಬಾವಲಿಗಳು ಬಂಧನದಲ್ಲಿ ಪಳಗಿ ಚೆನ್ನಾಗಿ ಆಹಾರವನ್ನು ತಿಂದು ಯಾವ ರೀತಿ ಪ್ರಯತ್ನ ಮಾಡಿದರೂ ಹಾರುವುದಕ್ಕಾಗದಷ್ಟು ಕೊಬ್ಬುತ್ತವೆ.

	ಬಾವಲಿಗಳ ಆಯುಸ್ಸಿನ ಬಗ್ಗೆ ಭಿನ್ನಾಭಿಪ್ರಾಯವಿದೆ. ಟೆರೊಪಸ್ ಜಾತಿಯ ಬಾವಲಿ ಬಂಧನದಲ್ಲಿ ಹತ್ತೊಂಬತ್ತು ವರ್ಷಗಳಕಾಲ ವಾಸಿಸಿದ್ದುವೆಂದೂ ವೆಸ್ಪರ್ಟೀಲಿಯಾನಿಡೀ ಕುಟುಂಬದ ಕೆಲವು ಪ್ರಭೇದಗಳು ಇಪ್ಪತ್ತು ವರ್ಷಗಳು ಜೀವಿಸುತ್ತವೆಯೆಂದೂ ವರದಿ ಇದೆ. ಬಹುಸಂಖ್ಯಾತ ಬಾವಲಿಗಳು ಸುಮಾರು 5-6 ವರ್ಷಗಳು ಬದುಕುತ್ತವೆ.

	ಸಮಶೀತೋಷ್ಣವಲಯಗಳ ಬಾವಲಿಗಳು ಚಳಿಗಾಲವನ್ನು ನಿಶ್ಚೇಷ್ಟ ಸ್ಥಿತಿಯಲ್ಲಿ ಕಳೆಯುವುದು ಒಂದು ವಿಶೇಷ ಸಂಗತಿ. ಬೇಸಗೆಯಲ್ಲಿ ಇವು ಸಮೃದ್ಧಿಯಾಗಿ ಆಹಾರವನ್ನು ತಿಂದು ಶರತ್ಕಾಲ ಮುಗಿಯುವ ವರೆಗೆ ಪುಷ್ಟಿಯಾಗಿ ಬೆಳೆದು ಮೈತುಂಬಿಕೊಂಡಿರುತ್ತವೆ. ಈ ಕಾಲದಲ್ಲಿ ತುಪ್ಪುಳಕ್ಕೂ ಸ್ನಾಯು ಹೊದಿಕೆಗೂ ಮಧ್ಯೆ ಒಂದು ಪದರದ ರೂಪದಲ್ಲಿ ಕೊಬ್ಬು ಶೇಖರವಾಗುತ್ತದೆ. ಚಳಿಗಾಲದಲ್ಲಿ ಈ ಕೊಬ್ಬು ಉಪಯೋಗಕ್ಕೆ ಬರುತ್ತದೆ; ಚಯಾಪಚಯ ಕ್ರಿಯೆಗಳಿಗೆ ಬೇಕಾಗುವ ಶಕ್ತಿ ಇದರಿಂದ ಒದಗುತ್ತದೆ. ಈ ಸ್ಥಿತಿಯಲ್ಲಿ ಹೊರಮೈ, ರೆಕ್ಕೆ ಮತ್ತು ಕಾಲುಗಳ ತುದಿಗಳ ಶಾಖ ಬಾವಲಿಯ ಪರಿಸರದಲ್ಲಿನ ಶಾಖಕ್ಕೆ ಇಳಿಯುತ್ತದೆ. ಆಮ್ಲಜನಕದ ಬಳಕೆಯೂ ಸಹಜಸ್ಥಿತಿಯ ಬಳಕೆಯಲ್ಲಿ ನೂರರಲ್ಲೊಂದು ಪಾಲಿಗೆ ಇಳಿಯುತ್ತದೆ. ನಿಶ್ಚೇಷ್ಟ ಸ್ಥಿತಿಗೆ ಕಾರಣವೇನೆಂದು ಗೊತ್ತಾಗಿಲ್ಲ. ಚಳಿಗಾಲದಲ್ಲಿ ಆಹಾರ ದೊರಕುವುದು ಕಡಿಮೆಯಾಗುವುದಾಗಲಿ ಹವದ ತೀಕ್ಷ್ಣತೆಯೇ ಆಗಲಿ ನಿಶ್ಚೇಷ್ಟ ಸ್ಥಿತಿಗೆ ಕಾರಣವಲ್ಲ. ಕೊಬ್ಬಿನ ಶೇಖರಣೆಯಿಂದ ದೇಹದಲ್ಲಿ ಉಂಟಾಗುವ ಒಂದು ಬಗೆಯ ಉತ್ತೇಜಕ ವಸ್ತುವೂ ಇಲ್ಲವೆ ಇನ್ನಾವುದೊ ಶಾರೀರಿಕ ವಸ್ತುವೊ ಇದಕ್ಕೆ ಕಾರಣವಿರಬಹುದು.

	ಬಾವಲಿಗಳ ಸಂತಾನೋತ್ಪತ್ತಿಯ ಕ್ರಮವೂ ವಿಶೇಷ ರೀತಿಯದು. ಚಳಿಗಾಲವನ್ನು ನಿಶ್ಚೇಷ್ಟಾವಸ್ಥೆಯಲ್ಲಿ ಕಳೆಯುವ ಬಾವಲಿಗಳಲ್ಲಿ ವಿಲಂಬಿತ ಗರ್ಭಧಾರಣೆಯನ್ನು ಕಾಣಬಹುದು. ಇವುಗಳಲ್ಲಿ ಸಂಭೋಗ ಮಾಗಿ ಕಾಲದಲ್ಲೆ ನಡೆದರೂ ಗರ್ಭಧಾರಣೆಯಾಗುವುದು ಮುಂದಿನ ವಸಂತದಲ್ಲೆ. ಈ ಅವಧಿಯಲ್ಲಿ ಪುರುಷಾಣುಗಳು ಹೆಣ್ಣಿನ ಗರ್ಭಕೋಶದಲ್ಲಿ ಇಲ್ಲವೆ ಯೋನಿನಾಳದಲ್ಲಿ ಒಂದು ಮುದ್ದೆಯಂತಾಗಿ ಶೇಖರವಾಗುತ್ತವೆ. ವಸಂತಕಾಲದಲ್ಲಿ ಈ ಮುದ್ದೆ ಕರಗಿ ಪುರುಷಾಣುಗಳು ಬಿಡುಗಡೆಯಾಗಿ ಅಂಡಗಳನ್ನು ನಿಶೇಚನಗೊಳಿಸುತ್ತವೆ. ಈ ವಿಚಿತ್ರ ಬಗೆಯ ಗರ್ಭಧಾರಣೆ ಬೇರಾವ ಬಾವಲಿಗಳಲ್ಲೂ ಕಂಡುಬರುವುದಿಲ್ಲ. ಬಹುಪಾಲು ಬಾವಲಿಗಳು ವರ್ಷಕ್ಕೆ ಒಂದೇ ಒಂದು ಮರಿಯನ್ನು ಈಯುತ್ತವೆ. ಹೊಸದಾಗಿ ಹುಟ್ಟಿದ ಮರಿಗಳಲ್ಲಿ ತುಪ್ಪುಳ ಇರುವುದಿಲ್ಲ. ಕಣ್ಣುಗಳಿನ್ನೂ ತೆರೆದಿರುವುದಿಲ್ಲ. ಕೆಲವು ವಾರಗಳ ವರೆಗೆ ತಾಯಿಯೇ ಇವನ್ನು ಹೊತ್ತು ತಿರುಗಾಡುತ್ತದೆ. ಅನಂತರ ಮರಿಗಳು ಗುಹೆಯ ಸುರಕ್ಷಿತ ಸ್ಥಳವೊಂದರಲ್ಲಿ ಹುದುಗಿದ್ದು ರೆಕ್ಕೆ ಬಲಿತ ಮೇಲೆ (ಸುಮಾರು 1-1ಳಿ ವರ್ಷದ ಮೇಲೆ) ಹಾರಲು ತೊಡಗುತ್ತವೆ ; ಎರಡನೆಯ ವರ್ಷದಿಂದ ಇವಕ್ಕೆ ಲೈಂಗಿಕ ಪ್ರಬುದ್ಧತೆ ಬರುತ್ತದೆ.

	ಕೈರಾಪ್ಟರ ಗಣದಲ್ಲಿ ಮೆಗಕೈರಾಪ್ಟರ ಮತ್ತು ಮೈಕ್ರೊಕೈರಾಪ್ಟರ ಎಂಬ ಎರಡು ಉಪಗಣಗಳಿವೆ.

	ಮೆಗಕೈರಾಪ್ಟರದಲ್ಲಿ ಟೀರೋಪೋಡಿಡೀ ಎಂಬ ಒಂದು ಕುಟುಂಬ, 40 ಜಾತಿಗಳು ಮತ್ತು 250 ಪ್ರಭೇದಗಳೂ ಮೈಕ್ರೊಕೈರಾಪ್ಟರದಲ್ಲಿ 18 ಕುಟುಂಬ, 250 ಜಾತಿಗಳು ಮತ್ತು 1030 ಪ್ರಭೇದಗಳೂ ಇವೆ. ಮೈಕ್ರೊಕೈರಾಪ್ಟರದ ಕುಟುಂಬಗಳು ಇವು-ಟಿರೋಪಿಡೀ, ರೈನೊಪೋಮಿಡೀ, ಮೆಗಡರ್ಮಿಡೀ, ನಿಕ್ಟರಿಡೀ, ಹಿಪ್ಪೊಸೈಡೆರಿಡೀ, ಮಿಸ್ಟಸಿನಿಡೀ, ನೇಟಾಲಿಡೀ, ತೈರೋಪ್ಟೆರಿಡೀ, ಫ್ಯೋರಿಟೆರಿಡೀ, ನಾಕ್ಟಿಲಿಯಾನಿಡೀ, ಫಿಲೊಸ್ಟೋಮಿಡೀ, ಡೆಸ್ಮೊಡಾಂಟಿಡೀ, ಎಂಬಲೊನ್ಯೂರಿಡೀ, ರೈನೋಲೋಫಿಡೀ, ಮೈಜೋóಪೋಡಿಡೀ, ಮೊಲಾಸ್ಸಿಡೀ ಮತ್ತು ವೆಸ್ಪರ್ಟೀಲಿಯಾನಿಡೀ. ಉಳಿದೆರಡು ಕುಟುಂಬಗಳ ಬಾವಲಿಗಳು ಈಗ ಜೀವಂತವಾಗಿಲ್ಲ.
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ